ಜನಾಬಾಯಿ	
 	1260-1353 ಮಹಾರಾಷ್ಟ್ರದ ಒಬ್ಬ ಸಂತ ಕವಯಿತ್ರಿ. ಆ ಪ್ರಾಂತ್ಯದ ಭಕ್ತ ಮಹಿಳೆಯರಲ್ಲಿ ಮುಕ್ತಾಬಾಯಿಯನ್ನು ಬಿಟ್ಟರೆ ಈಕೆಯೇ ಹಿರಿಯಳು. ಗೋದಾವರೀ ತೀರದ ಗಂಗಾಖೇಡ ಎಂಬ ಗ್ರಾಮದಲ್ಲಿ ಈಕೆ ಜನಿಸಿದಳು. ತಂದೆ ದಮಾ. ತಾಯಿ ಕುರುಂಡು. ಇವರಿಬ್ಬರೂ ಪಂಡರಪುರದ ವಿಟ್ಠಲನ ಭಕ್ತರು. ಹೀಗಾಗಿ ಜನಾಬಾಯಿ ಬಾಲ್ಯದಲ್ಲಿಯೇ ಧಾರ್ಮಿಕ ಪ್ರಭಾವಕ್ಕೆ ಒಳಗಾದಳು. ಮುಂದೆ ಸಂತ ನಾಮದೇವನ ಶಿಷ್ಯಳಾಗಿ ಆತನ ಸೇವೆಯಲ್ಲಿಯೇ ತನ್ನ ಜೀವಮಾನವನ್ನು ಕಳೆದಳು.

ದೇವರು, ಭಕ್ತಿ, ಜೀವನ ಮುಂತಾದ ವಿಷಯಗಳನ್ನು ಕುರಿತು ಜನಾಬಾಯಿ ನೂರಾರು ಅಭಂಗಗಳನ್ನು ರಚಿಸಿದ್ದಾಳೆ. ಈ ಅಭಂಗಗಳು ಭಾವದ ಉತ್ಕಟತೆಯನ್ನು ಒಳಗೊಂಡಿದ್ದು, ಒಳ್ಳೆಯ ಕಾವ್ಯಗುಣವನ್ನು ಹೊಂದಿವೆಯಾದರೂ ಇವುಗಳ ಭಾಷೆ ಸರಳವಾದ್ದು. ಇವು ಕರ್ತೃವಿನ ವ್ಯಕ್ತಿತ್ವವನ್ನು ಸ್ಫುಟವಾಗಿ ಚಿತ್ರಿಸುತ್ತವೆ.

ಜನಾಬಾಯಿಯ ಸಂದೇಶ ಇದು : ಶೂರರ ಶಸ್ತ್ರ, ಕೃಪಣರ ಧನ, ಪತಿವ್ರತೆಯ ಸ್ತನ-ಇವು ಪ್ರಾಣಹೋಗದೆ ಅನ್ಯರ ಕೈಸೇರಲಾರವು. ಹಾಗೆಯೇ ಅಹಂಕಾರ ಅಳಿಯದೆ ದೇವರು ನಮ್ಮ ಕೈವಶನಾಗನು. ಸದ್ಗುರುಗಳ ಸೇವೆಯೇ ಸುಖದ ಸಾಧನ. ಸುಖದ ಆಸೆಯಿಂದ ಪತಂಗ ಜ್ವಾಲೆಯನ್ನಪ್ಪಿ ಸುಟ್ಟು ಸತ್ತುಹೋಗುವಂತೆ ಜನ ವಿಷಯವಿಷದಲ್ಲಿ ಮುಳುಗಿ ಸತ್ತುಹೋಗುವರು. ಮದುಮಗನ ಜೊತೆಯಲ್ಲಿ ದಿಬ್ಬಣಿಗರಿಗೂ ಸವಿಯೂಟ ದೊರೆಯುವಂತೆ ನಾಮದೇವರ ಸಹವಾಸದಿಂದ ತನಗೂ ಪರಮಾತ್ಮನ ದರ್ಶನವಾಯಿತು. 											(ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ